ದೊಡ್ಡಗೋಣೀಸೊಪ್ಪು
	 ಪೋರ್ಟುಲಕೇಸೀ ಕುಟುಂಬಕ್ಕೆ ಸೇರಿದ ಒಂದು ವಾರ್ಷಿಕ ಮೂಲಿಕೆ. ಇದರ ವೈಜ್ಞಾನಿಕ ಹೆಸರು ಪೋಟುಲಕಾ ಓಲರೇಸೀಯ. ಇದು ನೆಲದ ಮೇಲೆ ಹರಡಿಕೊಂಡು ಇಲ್ಲವೆ ನೆಟ್ಟಗೆ ಬೆಳೆಯುವ ರಸಭರಿತ ಮೂಲಿಕೆ. ಸುಮಾರು 50 ಸೆಂ.ಮೀ. ಎತ್ತರಕ್ಕೆ ಬೆಳೆಯಬಲ್ಲದು. ಇದರ ಕಾಂಡ ಮತ್ತು ಎಲೆಗಳ ಮೇಲ್ಮೈ ನುಣುಪಾಗಿದೆ. ಕಾಂಡದ ಬಣ್ಣ ಹಸಿರು ಅಥವಾ ನೇರಿಳೆ. ಹೂಗೊಂಚಲು ಸಸ್ಯದ ತುದಿಭಾಗದಲ್ಲಿ ಸ್ಥಿತವಾಗಿದೆ. ಹೂಗಳು ದ್ವಿಲಿಂಗಿಗಳು. ಇವುಗಳ ಬಣ್ಣ ಹಳದಿ. ಪುಷ್ಪಪತ್ರಗಳು ಎರಡು. ಆದರೆ ಪುಷ್ಪದಳಗಳ ಸಂಖ್ಯೆ ನಾಲ್ಕರಿಂದ ಆರು. ಅಂಡಾಶಯ ಒಂದೇ ಕೋಣೆಯುಳ್ಳದ್ದು, ಫಲ ಒಡೆಯುವ ಮಾದರಿಯದು. ಬೀಜಗಳು ಅನೇಕ. ಇವು ಕಪ್ಪು ಬಣ್ಣಕ್ಕಿವೆ.

	ದೊಡ್ಡಗೋಣೀಸೊಪ್ಪು ಭಾರತದ ಎಲ್ಲೆಡೆಗಳಲ್ಲೂ ಕಳೆಗಿಡವಾಗಿ ಕಾಣಿಸಿಕೊಳ್ಳುವುದು. ಈ ಪ್ರಭೇದದಲ್ಲಿ ಸಿಲ್ವೆಸ್ಟ್ರಿಸ್ ಮತ್ತು ಸೇಟಿವ ಎಂಬ ಎರಡು ಬಗೆಗಳುಂಟು. ಭಾರತದ ಕೆಲವೆಡೆಗಳಲ್ಲೂ ಯೂರೋಪಿನಲ್ಲೂ ಸೇಟಿನ ಬಗೆಯನ್ನು ತರಕಾರಿ ಸಸ್ಯವನ್ನಾಗಿ ಬೆಳೆಸುವುದುಂಟು. ಬಯಲು ಪ್ರದೇಶಗಳಲ್ಲಿ ಇದನ್ನು ಮಾರ್ಚ್ - ಜೂನ್ ಅವಧಿಯಲ್ಲೂ ಬೆಟ್ಟ ಪ್ರದೇಶಗಳಲ್ಲಿ ಏಪ್ರಿಲ್ ಸೆಪ್ಟೆಂಬರ್ ಅವಧಿಯಲ್ಲೂ ಕೃಷಿ ಮಾಡಲಾಗುತ್ತದೆ. ಇದನ್ನು ಎಲ್ಲ ರೀತಿಯ ಮಣ್ಣಿನಲ್ಲಿ ಬೆಳೆಸಬಹುದಾದರೂ ಗೋಡು ಮಣ್ಣಿನಲ್ಲಿ ಇದು ಹೆಚ್ಚು ಹುಲುಸಾಗಿ ಬೆಳೆಯುವುದು. ಇದನ್ನು ಬೆಳೆಸುವ ಮೊದಲು ಒಂದು ಹೆಕ್ಟೇರ್ ಪ್ರದೇಶಕ್ಕೆ 40 ಗಡಿಗಳಷ್ಟು ಗೊಬ್ಬರವನ್ನು ಹಾಕಲಾಗುವುದು. ಒಂದು ಹೆಕ್ಟೇರಿಗೆ 2 ರಿಂದ 3 ಕೆಜಿಗಳಷ್ಟು ಬಿತ್ತನೆ ಬೇಕು. ಬಿತ್ತುವ ಮೊದಲು ಬೀಜಗಳನ್ನು ಮರಳಿನ ಜೊತೆ ಬೆರೆಸುವುದು. ಬೀಜ ಮೊಳೆತ ಅನಂತರ ವಾರಕ್ಕೊಂದಾವರ್ತಿಯಾದರೂ ನೀರು ಹಾಯಿಸಲಾಗುತ್ತದೆ. ಬಿತ್ತನೆಯಾದ ಸುಮಾರು 60 ದಿನಗಳ ಅನಂತರ ಗಿಡಗಳು ಕೊಯ್ಲಿಗೆ ಬರುತ್ತವೆ. ನಿರಂತರವಾಗಿ ಇದರ ಬೆಳೆಯನ್ನು ತೆಗೆಯುವ ಸಲುವಾಗಿ 15 ದಿನಕ್ಕೊಮ್ಮೆ ಬೀಜ ಬಿತ್ತುವುದು ರೂಢಿಯಲ್ಲಿದೆ.

	ದೊಡ್ಡಗೋಣೀಸೊಪ್ಪನ್ನು ಸಾರು ಪಚ್ಚಡಿಗಳಲ್ಲಿ ಉಪಯೋಗಿಸಲಾಗುವುದು. ಇದರ ರಸಭರಿತ ಕಾಂಡಗಳನ್ನು ಉಪ್ಪಿನಕಾಯಿ ತಯಾರಿಕೆಗೆ ಬಳಸುವುದುಂಟು. ದನಕರು, ಕುರಿ, ಹಂದಿ ಮೊದಲಾದ ಪ್ರಾಣಿಗಳ ಮೇವಾಗಿಯೂ ಇದು ಉಪಯುಕ್ತವೆನಿಸಿದೆ. ಆದರೆ ಇದರಲ್ಲಿ ಆಕ್ಸಾಲಿಕ್ ಆಮ್ಲದ ಪ್ರಮಾಣ ಹೆಚ್ಚಾಗಿರುವುದರಿಂದ ಕೆಲವೊಮ್ಮೆ ಹಾನಿ ಉಂಟುಮಾಡುವ ಸಂಭವವೂ ಇದೆ. ಈ ಮೂಲಿಕೆ ಮೂತ್ರಸ್ರಾವ ಉತ್ತೇಜಕ ಮತ್ತು ಶಮನಕಾರಕ ಔಷಧಿಯೂ ಹೌದು. ಪಿತ್ತಜನಕಾಂಗ, ಮೂತ್ರಜನಕಾಂಗ ಮತ್ತು ಗುಲ್ಮದ ರೋಗಗಳಲ್ಲಿ ಇದನ್ನು ಉಪಯೋಗಿಸುವುದಿದೆ. ಇಸಬು, ಹುಳುಕಡ್ಡಿ ಮೊದಲಾದ ಚರ್ಮವ್ಯಾಧಿಗಳಿಗೂ ಹೃದಯಸಂಬಂಧ ಕಾಯಿಲೆಗಳಿಗೂ ಇದೊಂದು ಒಳ್ಳೆಯ ಔಷಧಿ. ಆಮಶಂಕೆ ಮತ್ತು ಬಾಯಿಹುಣ್ಣುಗಳಿಗೂ ಉತ್ತಮ ಮದ್ದು. ದೊಡ್ಡ ಗೋಣೀಸೊಪ್ಪಿನ ರಸವನ್ನು ಕಿವಿ ನೋವು ಮತ್ತು ಹಲ್ಲುನೋವು ನಿವಾರಣೆಗೆ ಬಳಸುತ್ತಾರೆ. ಹೋಮಿಯೋಪತಿ ವೈದ್ಯದಲ್ಲಿ ಇದನ್ನು ಜೀರ್ಣರಸಸ್ರಾವಕ್ಕೆ ಮತ್ತು ರಕ್ತ ಶುದ್ಧಿಗೆ ಶಿಫಾರಸು ಮಾಡುವುದುಂಟು. ಹುಣ್ಣು, ಸುಟ್ಟಗಾಯ, ಊತಗಳಿಗೆ ಬೆಚ್ಚಾರವನ್ನಾಗಿ ಬಳಸುವರು. ರಕ್ತಪಿತ್ತನಿವಾರಕ ಮತ್ತು ಸುಖ ವೀರೇಚಕವಾಗಿಯೂ ಇದು ಬಳಕೆಯಲ್ಲಿದೆ.

	ಎಲೆಸಸ್ಯದ ಹಸಿರು ಎಲೆಗಳಲ್ಲಿ ಸಿ ವೈಟಮಿನ್ನಿನ ಪರಿಮಾಣ ಹೆಚ್ಚಾಗಿದೆ. ಆದರೆ ಹೂಬಿಟ್ಟ ಅನಂತರ ಈ ಮೊತ್ತ ಕಡಿಮೆಯಾಗುತ್ತದೆ. ಈ ಸಸ್ಯವನ್ನು ಹಸಿರು ಗೊಬ್ಬರವಾಗಿ ಬಳಸುವುದುಂಟು. ಕೆಲವೊಮ್ಮೆ ದೊಡ್ಡಗೋಣೀಸೊಪ್ಪಿನ ಗಿಡ ಇತರ ಬಗೆಯ ಗಿಡಗಳಿಗೆ ಹಾನಿಕರವಾಗುವುದರಿಂದ ಅಮೋನಿಯಮ್ ಲವಣಗಳ ದ್ರಾವಣ ಮತ್ತು 2-4 ಡಿ ಗಳನ್ನು ಸಿಂಪಡಿಸುವುದರ ಮೂಲಕ ಈ ಸಸ್ಯವನ್ನು ಹತೋಟಿಯಲ್ಲಿಡಲಾಗುತ್ತದೆ.
(ಎಸ್.ಡಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ